ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ.

Shri Jnanashakthi Subrahmanyaswami Temple, Nagavruja Kshetra Pavanje

ಕಾರ್ತಿಕ ದೀಪೋತ್ಸವ – 02.11.2024 ರಿಂದ 04.12.2024ರ ವರೆಗೆ ಪ್ರತಿನಿತ್ಯ ಸಂಜೆ 6.30ರಿಂದ)

ಶ್ರೀ ದೇವಳದಲ್ಲಿ ಕಾರ್ತಿಕ ಮಾಸ ಪರ್ಯಂತ ಸಂಜೆ ನಿತ್ಯ ರಂಗಪೂಜೆಯ ಬಳಿಕ ನಡೆಯುವ “ಕಾರ್ತಿಕ ದೀಪೋತ್ಸವ”ದ ಸಂಕ್ಷಿಪ್ತ ವಿವರಣೆ. ದೇಹೋ ದೇವಾಲಯ ಪ್ರೋಕ್ತೋ ಜೀವೋ ಹಂಸ: ಸದಾಶಿವ: | ತ್ಯಜೇತ್ ಅಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್ | ಇದು ಆತ್ಮ ಪರಮಾತ್ಮ ಅನುಸಂಧಾನೋಪಾಯ, ಸಾಧಕರಿಗೂ, ವಿದ್ವಾಂಸರಿಗೂ, ಜ್ಞಾನಿಗಳಿಗೂ ಸಾಧ್ಯವಾದ ಸ್ವರೂಪ ವಿಧಾನ. ಆದರೆ ಸಾಮಾನ್ಯರಿಗೂ ಪರಮಾತ್ಮ ಸಾನಿಧ್ಯ ಬೇಡವೇ? ಕೈವಲ್ಯ ಪ್ರಾಪ್ತಿಯ ಪ್ರಯತ್ನವಾದರೂ ಬೇಡವೇ? ಪ್ರಾಪಂಚಿಕ ಜೀವನದ ತೊಳಲಾಟ, ಡೊಂಬರಾಟದಿಂದ ಮುಕ್ತಿ ಬೇಡವೇ? ಜೀವನದ ಹೋರಾಟದಲ್ಲಿ ಸ್ವಲ್ಪ ಕಾಲವಾದರೂ ಬಿಡುಗಡೆ ಬೇಡವೇ? ಇದೆಲ್ಲ ಬೇಕೆಂದಾಗ ಸಹಜ ಪ್ರಾಪಂಚಿಕ ಜೀವನದಲ್ಲಿ ತೊಡಗಿರುವ ಜನಸಾಮಾನ್ಯರಿಗೆ ಅಲ್ಪಸ್ವಲ್ಪವಾದರೂ ಪರಮಾತ್ಮ ಸಾನಿಧ್ಯವನ್ನು ಒದಗಿಸಿ ಕೊಡುವ ಪ್ರಯತ್ನವೇ ದೇವಾಲಯ. ಇಲ್ಲಿ ಸಾಮಾನ್ಯ ಜೀವನ ನಡೆಸುತ್ತಾ ಬದುಕಿನಲ್ಲಿ ಕೇವಲ ಸತ್ಯ, ಪ್ರಾಮಾಣಿಕತೆ ಅಹಿಂಸೆ ಮಾತ್ರವಿದ್ದರೆ ಸಾಕು. ಆತ್ಮೋನ್ನತಿ ಸಾಧಿಸಲು ಸನ್ಮಾರ್ಗ ದರ್ಶಕವಾಗಬಲ್ಲದು ದೇವಾಲಯ. ಸಾಮಾನ್ಯ ಜನರಿಗೆ ಬರುವ ಕಷ್ಟಕಾರ್ಪಣ್ಯಗಳ ನಿವೇದನೆಗೆ ಬಂದು ಸೂಕ್ತ ಪ್ರತಿವಚನವಿಲ್ಲದ ಸ್ಥಳವೇ ದೇವಾಲಯ. ಈ ಮೇಲ್ಕಂಡ ಎಲ್ಲಾ ಉದ್ದೇಶಗಳನ್ನು ಮುಖ್ಯವಾಗಿಟ್ಟುಕೊಂಡು ನಮ್ಮ ಋಷಿಮುನಿಗಳು ಆಗಮ ಸೂತ್ರಗಳನ್ನು ರಚಿಸಿದರು. ಅವುಗಳ ಆಧಾರದಲ್ಲಿ ದೇವಾಲಯ ರಚಿಸಿ ಭಕ್ತಾದಿಗಳ ಹೃದ್ಯಸ್ಥ ಭಗವಂತನಿಗೂ, ಸ್ಥಾಪಿತ ಮಹಾ ಚೈತನ್ಯಕ್ಕೂ ಸಂಪರ್ಕ ಕಲ್ಪಿಸುವ ವ್ಯವಸ್ಥೆ ದೇವಾಲಯವಾಗಿರುತ್ತದೆ. ಆಗಮೊಕ್ತವಾಗಿ ರಚಿಸಲ್ಪಟ್ಟ ದೇವಾಲಯಗಳಲ್ಲಿ ದೀಪೋತ್ಸವ ಎಂಬ ವಿಶೇಷ ಸೇವೆಯನ್ನು ಏಳು ವಿಧಗಳಲ್ಲಿ ಆಚರಿಸಬಹುದು. ಕಾರ್ತಿಕ ದೀಪೋತ್ಸವ, ಸಿಂಹ ದೀಪೋತ್ಸವ, ಕರತಾಟಕ ದೀಪೋತ್ಸವ, ವಾರುಣಿ ದೀಪೋತ್ಸವ, ಲಂಬ ಘಂಟಾ ದೀಪೋತ್ಸವ, ವಸ್ತ್ರ ಛಾಯಾ ದೀಪೋತ್ಸವ ಹಾಗೂ ಸುಗಂಧ ದೀಪೋತ್ಸವ. ಇದರಲ್ಲಿ ತೈಲದೀಪ, ವನಸ್ಪತಿ ದೀಪ, ಘೃತ ದೀಪ ಎಂದು ಮೂರು ಪ್ರಕಾರಗಳು. ಮಾಲಾಕಾರವಾಗಿಯೂ ತುಲಾಕಾರವಾಗಿಯೂ ಎತ್ತರದಲ್ಲಿ ಜಾಜ್ವಲ್ಯಮಾನವಾಗಿ ಉರಿದು ಬಾಹ್ಯ ಜಗತ್ತಿನ ಕತ್ತಲೆಯ ನೀಗುವ ದೀಪಾವಳಿಯೇ ಕಾರ್ತಿಕ ದೀಪ, ಇದಕ್ಕೆ ತೈಲ ಪ್ರಾಧಾನ್ಯತೆ. ಶ್ರೀ ದೇವಳದಲ್ಲಿ ದೇವತಾ ಪ್ರತಿಷ್ಠಾ ಕಾಲದಲ್ಲಿ ಸಂಯೋಜಿಸಲ್ಪಟ್ಟ ತಂತ್ರ ಸೂತ್ರದಂತೆ ಕಾರ್ತಿಕ ಮಾಸ ಪೂರ್ತಿ ಕಾರ್ತಿಕ ದೀಪೋತ್ಸವ ಸೇವೆ ಜರುಗುತ್ತದೆ. ಸಂಜೆಯ ನಿತ್ಯ ಪೂಜೆ, ನಿತ್ಯರಂಗ ಪೂಜೆಯ ಬಳಿಕ ಉತ್ಸವ ಮೂರ್ತಿಯನ್ನು ಗರ್ಭಗೃಹದಿಂದ ಹೊರ ತಂದು ಒಳಾಂಗಣದ ಇಕ್ಕೆಲದಲ್ಲಿ ಬೆಳಗುತ್ತಿರುವ ಸುಮಾರು ಒಂದು ಸಾವಿರ ಹಣತೆಗಳ ನಡುವೆ ಅಷ್ಟಾವಧಾನ ಸೇವಾ ಪೂರ್ವಕ ಮೂರು ಪ್ರದಕ್ಷಿಣೆ ಬರಲಾಗುತ್ತದೆ. ತದನಂತರ ತೀರ್ಥ ಮಂಟಪದ ಎದುರು ಬಂದು ಪೂರ್ವಾಭಿಮುಖವಾಗಿ ನಿಂತಾಗ ಹೊರಾಂಗಣದಲ್ಲಿ ಎತ್ತರದಲ್ಲಿ ದೊಡ್ಡದಾಗಿ ದೀಪವನ್ನು ಬೆಳಗಲಾಗುತ್ತದೆ. ತನ್ಮುಖೇನ ರಾಷ್ಟ್ರದ ಸಮಸ್ಯೆಗಳನ್ನು ದೇವರಲ್ಲಿ ಅರಿಕೆ ಮಾಡಿಕೊಂಡು ರಾಷ್ಟ್ರೊನ್ನತಿಯನ್ನು ಹರಸಬೇಕೆಂದು ರಾಷ್ಟ್ರಾಶೀರ್ವಾದ ಮಂತ್ರಗಳ ಪಠಣದೊಂದಿಗೆ ಪ್ರಾರ್ಥಿಸಲಾಗುತ್ತದೆ. ಆ ಬಳಿಕ ಉತ್ಸವ ಮೂರ್ತಿಯನ್ನು ಪುನಃ ಗರ್ಭಗೃಹದಲ್ಲಿ ಇರಿಸಿ ಮಹಾ ಮಂಗಳಾರತಿ. ಕೊನೆಯದಾಗಿ 22 ದೀಪಗಳಿಂದ ಕೂಡಿದ ಶಕುನಾರತಿ ಎಂಬ ಆರತಿಯನ್ನು ಅಥರ್ವ ವೇದದಿಂದ ಆರಿಸಿದ ವಿಶೇಷ ಮಂತ್ರಗಳ ಪಠನದೊಂದಿಗೆ ಬೆಳಗಲಾಗುತ್ತದೆ. ಅದೇ ಸಮಯದಲ್ಲಿ ಹೊರಾಂಗಣದಲ್ಲಿ ಇನ್ನೊಮ್ಮೆ ದೊಡ್ಡದಾಗಿ ದೀಪವನ್ನು ಬೆಳಗಿ ದೇವರ ಅಭಯವನ್ನು ಬೇಡಲಾಗುತ್ತದೆ. ಕಾರ್ತಿಕ ಮಾಸದ ಅಮಾವಾಸ್ಯೆಯಂದು ರಾತ್ರಿ ನಮ್ಮೀ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ, ತಮ್ಮ ಸರ್ವಸ್ವವನ್ನೂ ಸಮರ್ಪಿಸಿಕೊಂಡು ಬಾಳಿದ ಸಾಧು ಸಂತರ, ಸಾಧಕರ ನಿಷ್ಠೆ, ಶ್ರದ್ಧೆ, ಅರ್ಪಣಾ ಮನೋಭಾವ, ಮುಖ್ಯವಾಗಿ ತ್ಯಾಗವನ್ನು ಸ್ಮರಿಸುತ್ತಾ, ಅದರಂತೆ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಲಕ್ಷ್ಯವಿರಿಸಿ, ನಿವೃತ್ತ ಅಥವಾ ಸೇವಾ ನಿರತ ಸೇನಾಪಡೆಯ ಪ್ರತಿನಿಧಿಯನ್ನು ಆಹ್ವಾನಿಸಿ ದೀಪಗಳನ್ನು ಎತ್ತರದಲ್ಲಿ ಬೆಳಗಲಾಗುತ್ತದೆ, ಇದೇ “ಲಕ್ಷ್ಯ ದೀಪೋತ್ಸವ”

https://youtu.be/Y5bwh5YvbCw

https://youtu.be/R-hIucoa6BU