ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ.

Shri Jnanashakthi Subrahmanyaswami Temple, Nagavruja Kshetra Pavanje

ಶ್ರೀ ಅಣ್ಣಪ್ಪಯ್ಯ ಚರಿತ್ರೆ

ಸಪ್ತ ಋಷಿಗಳಲ್ಲಿ ಶ್ರೇಷ್ಠರಾದ ವಸಿಷ್ಠರ ಅಂಶದಲ್ಲಿ ಸುಮಾರು 2000 ವರುಷದ ಹಿಂದೆ ಜನಿಸಿದವರು ಶ್ರೀ ಅಣ್ಣಪ್ಪಯ್ಯನವರು. ಷಟ್ ಶಾಸ್ತ್ರ ಕೋವಿದರಾದ ಇವರು ತನ್ನಯ ಜೀವಿತಾವಧಿಯಲ್ಲಿ ಅಖಂಡಭಾರತಾದ್ಯಂತ ಸಂಚರಿಸಿ ದೇಶದೆಲ್ಲೆಡೆ ನ್ಯಾಯದಾನದ ವ್ಯವಸ್ಥೆಯನ್ನು ಮಾಡಿ ಧರ್ಮ ನೆಲೆಯಾಗುವಂತೆ ಮಾಡಿದ ಯತಿಶ್ರೇಷ್ಠರು. ಪ್ರಾತಃಸ್ಮರಣೀಯರಾದ ಇವರು ಒಂದು ಕೈಯಲ್ಲಿ ಪಂಜು (ಅಜ್ಞಾನವೆಂಬ ಕತ್ತಲೆಯನ್ನು ನೀಗಿಸುವ ಸಂಕೇತ) ಇನ್ನೊಂದರಲ್ಲಿ ಉರುಳಿ (ಸಾಧನೆಯ ದ್ಯೋತಕ) ಹಿಡಿದು ಸತ್ಯದೇವತೆ, ಪಂಜುರ್ಲಿ, ಅಣ್ಣಪ್ಪ ಪಂಜುರ್ಲಿ, ಅಣ್ಣಪ್ಪ ಸ್ವಾಮಿ ಇತ್ಯಾದಿ ಹೆಸರುಗಳಲ್ಲಿ ದೈವವಾಗಿ ಪೂಜೆಗೊಳ್ಳುತ್ತಿದ್ದಾರೆ. ನಿತ್ಯ ಸತ್ಯೋಪಾಸಕರಾದ ಬ್ರಹ್ಮದೇವನ ಸಮಾನ ಜ್ಞಾನಿಯಾಗಿದ್ದು ತಮ್ಮ ಸಕಲ ತಪೋಬಲ, ಸಾಧನಾ ಬಲವನ್ನು ವರಶಿಷ್ಯ ಕೋಲಮನಿಗಳ ಮೂಲಕ ಆಚಾರ್ಯ ಶಂಕರ ಭಗವತ್ಪಾದರಿಗೆ ಧಾರೆಯೆರೆದ ಮಹಾತ್ಮರು. ಶ್ರೀ ಅಣ್ಣಪ್ಪಯ್ಯನವರು 800 ವರುಷ ಕಾಲ ಜೀವಿಸಿ ನಂತರ ನಾಗವೃಜ ಕ್ಷೇತ್ರ ಪಾವಂಜೆಯಲ್ಲಿ ದೇಹತ್ಯಾಗ ಮಾಡಿ ತನ್ನಯ ಮೂಲ ಶಕ್ತಿಯಲ್ಲಿ ಐಕ್ಯವಾಗಿರುವರು. ಶ್ರೀ ಕ್ಷೇತ್ರದಲ್ಲಿ ಪೂಜ್ಯರು ಯತಿ ಸ್ವರೂಪದಲ್ಲಿ ಪೂಜೆಗೊಳ್ಳುತ್ತಿದ್ದು ಆರ್ತರ ಕಷ್ಟ ಕೋಟಲೆಗಳನ್ನು ನೀಗಿಸುವ ಮಮತಾಮಯರಾಗಿದ್ದಾರೆ. ವಿಶೇಷವಾಗಿ ಪಾದುಕಾ ಪೂಜೆಯನ್ನು ಮಾಡುವ ಭಕ್ತರಿಗೆ, ಅವರ ಮನಸ್ಸಿನ ಚಂಚಲತೆಯನ್ನು ದೂರೀಕರಿಸಿ, ಸ್ಥಿರತೆಯನ್ನು ಕರುಣಿಸಿ, ಜೀವನದಲ್ಲಿ ಸತ್ಯ, ನ್ಯಾಯ, ಧರ್ಮದ ಮಾರ್ಗದಲ್ಲಿ ನಡೆಯಲು ಬೇಕಾದ ಶಕ್ತಿಯನ್ನು ತುಂಬುವ ಮಹಾನ್ ಚೈತನ್ಯವಾಗಿದ್ದಾರೆ. ————————————————————————–

ಡಿಸೆಂಬರ್ 2007ರಲ್ಲಿ ಪಾವಂಜೆಯಲ್ಲಿ ಶಾಸ್ತ್ರೋಕ್ತವಾಗಿ ನಡೆದ ಸೌತ್ರಾಮಣಿ ಗವಾಮಯನ ಯಾಗದ ನಿರ್ದೇಶಕರಾದ ಬ್ರಹ್ಮರ್ಷಿ ಕೆ.ಎಸ್ ನಿತ್ಯಾನಂದ ಸ್ವಾಮೀಜಿಯವರು ಅಣ್ಣಪ್ಪಯ್ಯರ ಜೀವನ ಸಾಧನೆಗಳನ್ನು ಮನಗಂಡರು. ಅಣ್ಣಪ್ಪಯ್ಯ ಯುವ ವೇದಿಕೆಯ ಸದಸ್ಯರ ಆಗ್ರಹದ ಮೇರೆಗೆ ಪದ್ಯ ರೂಪದಲ್ಲಿ ಅದನ್ನು ಸೆರೆಹಿಡಿದರು. ತಮ್ಮ ಸಾಧನೆಯ ಫಲವಾದ ಖೇಚರೀ ವಿದ್ಯೆಯ ಮೂಲಕ ಸುಮಾರು 2000 ವರ್ಷಗಳಷ್ಟು ಪೂರ್ವಕ್ಕೆ ಸರಿದು ವಿಚಾರವನ್ನು ಪ್ರಮಾಣೀಕರಿಸಿದ್ದಾರೆ. ಪ್ರತ್ಯಕ್ಷ ಪ್ರಮಾಣ ಬಯಸುವವರಿಗೆ ಖೇಚರೀ ವಿದ್ಯಾ ಸಾಧನೆಯ ಸೂತ್ರವನ್ನು ಹೇಳಿ, ಶ್ರದ್ಧಾನ್ವಿತ ಆಸಕ್ತರು ಸಾಧಿಸಿ ತಿಳಿಯಬಹುದೆಂದಿದ್ದಾರೆ. ಕುತೂಹಲಿಗಳು ಶ್ರದ್ಧಾ ಭಕ್ತಿಯಿಂದ ಅನುಷ್ಠಾನಿಸಿದ್ದಲ್ಲಿ ನೈಜ ಜ್ಞಾನದ ಪ್ರಭುತ್ವವನ್ನು ಪಡೆಯಬಹುದಾಗಿದೆ. ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗಾಗಿ ವೇದ ವಿದ್ಯೆಯು ಪ್ರಪಂಚದಲ್ಲಿ ಬಳಕೆಯಾಗುವ ದಿಸೆಯಲ್ಲಿ ಪ್ರಯತ್ನಿಸಿದ್ದಾರೆ. ಆ ಸನ್ಮಾರ್ಗದಲ್ಲಿ ನಡೆಯಬೇಕಾದ ನಾವು ಪ್ರಯತ್ನಶೀಲರಾದಲ್ಲಿ ಕಿಂಚಿತ್ ಜ್ಞಾನವನ್ನು ನಮ್ಮದಾಗಿಸಿಕೊಳ್ಳಬಹುದು. ಈ ಮೂಲಕ ಅಣ್ಣಪ್ಪಯ್ಯನವರ ಬದುಕಿನ ಚರಿತ್ರೆ ನಮಗೆ ದೊರೆತಿದೆ. ಇದನ್ನು ಕೇಳಿ/ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಬದ್ಧತೆ ನಮಗಿದೆ. ಸಮಾಜಕ್ಕೆ ತಿಳಿಸಿಕೊಡಬೇಕಾದ ಜವಾಬ್ದಾರಿಯೂ ನಮ್ಮ ಪಾಲಿಗಿದೆ. ಇಂತಹ ಅಪೂರ್ವ ಕೃತಿಕುಸುಮವನ್ನು ಶ್ರೀ ಅಣ್ಣಪ್ಪಯ್ಯ ಚರಿತ್ರೆ ಎಂಬ ಹೆಸರಿನೊಂದಿಗೆ ನೀಡಿ ಅನುಗ್ರಹಿಸಿದ ಪರಮಪೂಜ್ಯರಾದ ಶ್ರೀ ನಿತ್ಯಾನಂದ ಸ್ವಾಮೀಜಿಯವರಿಗೆ ಶ್ರೀ ಅಣ್ಣಪ್ಪಯ್ಯ ಯುವ ವೇದಿಕೆಯು ಸಾಷ್ಟಾಂಗ ಪೊಡಮಡುತ್ತದೆ. ತಮ್ಮ ಕರಗಳನ್ನು ಅಲಂಕರಿಸಿ, ಕರ್ಣಗಳ ಮೂಲಕ ಕೇಳಿ, ಮನಸ್ಸನ್ನು ಸಂಸ್ಕರಿಸಿಕೊಳ್ಳಲು, ಆಸಕ್ತರಾದ ಸಹೃದಯರ ಹೃದಯಕಮಲಕ್ಕೆ ವಂದಿಸುತ್ತಾ, ಲೋಕಾರ್ಪಣೆಗೊಳಿಸುತ್ತಿದ್ದೇವೆ. ವಿಜ್ಞಾನ ಗೊಬ್ಬರದಿ ಸುಜ್ಞಾನ ಬೆಳೆಯೋಣ ಜಜ್ಞಾನದಿಂ ನಾವೆಲ್ಲ ಒಂದಾಗಿ ಬ್ರಹ್ಮರಾಗೋಣ ಕಥಾ ಸಂಗ್ರಹಣೆ ಮತ್ತು ಅನ್ವೇಷಣೆ : ವೇದ ಕೃಷಿಕ ಕೆ.ಎಸ್ ನಿತ್ಯಾನಂದ. ಯಕ್ಷಗಾನ ಹಿಮ್ಮೇಳ ಭಾಗವತರು: ಪದ್ಯಾಣ ಗಣಪತಿ ಭಟ್ ಮತ್ತು ಪುತ್ತಿಗೆ ರಘುರಾಮ ಹೊಳ್ಳ. ಚೆಂಡೆ : ಪದ್ಯಾಣ ಶಂಕರನಾರಾಯಣ ಭಟ್ ಮದ್ದಲೆ: ಪದ್ಯಾಣ ಪಿ.ಟಿ ಜಯರಾಂ. ನಿರೂಪಣೆ : ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ಹೇಮಂತ್ ಕುಮಾರ್ ಜಿ ಸಂಪೂರ್ಣ ಸಹಕಾರ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ.